ಡ್ರಗ್ಸ್ ರಾಣಿಯರಿಗೆ ಬೇಲ್ ನೀಡದಿದ್ದರೆ ಬಾಂಬ್ ಬೆದರಿಕೆ – ನಾಲ್ವರ ಬಂಧನ!
ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿ ಹಾಗೂ ಸಂಜನಾಗೆ ಬೇಲ್ ಕೊಡದಿದ್ದರೆ, ಬಾಂಬ್ ಹಾಕುತ್ತೇವೆ ಎಂದು ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಗಿಣಿ ಮತ್ತು ಸಂಜನಾಗೆ ಜಾಮೀನು ನೀಡದೆ ಇದ್ದರೆ, ಸಿಟಿ ಸಿವಿಲ್ ಕೋರ್ಟ್ ಮತ್ತು ಕಮೀಷನರ್ ಆಫೀಸಿಗೆ ಬಾಂಬ್ ಹಾಕುತ್ತೇವೆ ಎಂಬ ಬೆದರಿಕೆ ಪತ್ರವೊಂದು ಬಂದಿತ್ತು. ಈ ಪತ್ರವನ್ನು ಸಿಟಿ ಸಿವಿಲ್ ಕೋರ್ಟ್ ಜಡ್ಜ್, ಕಮೀಷನರ್ ಕಮಲ್ ಪಂಥ್, ಜಂಟಿ ಪೊಲೀಸ್ ಆಯುಕ್ತ, ಸಂದೀಪ್ ಪಾಟೀಲ್ ಮತ್ತು ಡಿಸಿಪಿ ರವಿಕುಮಾರ ಅವರಿಗೆ ಬರೆಯಲಾಗಿತ್ತು.
ಪತ್ರ ಕಳುಹಿಸಿದ್ದ ವ್ಯಕ್ತಿ, ಪತ್ರದೊಂದಿಗೆ ವ್ಯಕ್ತಿಯೊಬ್ಬರ ವೋಟರ್ ಐಡಿ ಮತ್ತು ಎರಡು ಮೊಬೈಲ್ ನಂಬರ್ ಕಳುಹಿಸಿದ್ದ. ವೋಟರ್ ಐಡಿ ಕೊಡಿಯಳ್ಳಿ ಪಂಚಾಯತ್, ಹರಿವೇಸಂದ್ರ ಗ್ರಾಮದ ಶಿವಪ್ರಕಾಶ್ ಎಂಬ ಹೆಸರಿನಲ್ಲಿ ಪತ್ರ ಬಂದಿತ್ತು. ಎನ್ ಡಿಪಿಎಸ್ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬಂದಿದ್ದು, ನಟಿ ಸಂಜನಾ ಮತ್ತು ರಾಗಿಣಿಗೆ ಜಾಮೀನು ನೀಡಬೇಕು. ಇಲ್ಲವಾದಲ್ಲಿ ಕಾರು ಉಡಾಯಿಸುತ್ತೇವೆ ಎಂದು ಹೇಳಲಾಗಿತ್ತು.
ಸಿಸಿಬಿ ಡಿಸಿಪಿ ರವಿಕುಮಾರ್ ಮತ್ತು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಬಂದ ಪತ್ರದಲ್ಲಿ ಡ್ರಗ್ ಕೇಸ್ ಹಾಗು ಡಿಜೆ ಹಳ್ಳಿ ಕೇಸ್ ತನಿಖೆ ನಿಲ್ಲಿಸದಿದ್ದರೆ ಸರಿ ಇರುವುದಿಲ್ಲ ಎಂದು ಎಚ್ಚರಿಸಲಾಗಿತ್ತು.